ಕೀಟಗಳ ಜಗತ್ತಿನಲ್ಲಿ ಚಿಟ್ಟೆಗಳಿಗೆ ವಿಶೇಷ ಸ್ಥಾನವಿದೆ. ಹಾರುವ ಆಭರಣಗಳು (Flying Jewels) ಎಂದೇ ಕರೆಸಿಕೊಳ್ಳುವ ಚಿಟ್ಟೆ ಆ ಹೆಸರಿನಿಂದಲೇ ತಾನು ಎಷ್ಟು ಆಕರ್ಷಕ ಎಂಬುದನ್ನು ತಿಳಿಸುತ್ತದೆ. ಈ ಪಾರ್ಕ್ ಚಿಟ್ಟೆಗಳ ಸಂರಕ್ಷಣೆಯ ಮೂಲ ಉದ್ದೇಶದೊಂದಿಗೆ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳ ಕೇಂದ್ರವಾಗಿದೆ.
2003ರಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರ (ZAK)ವು ಜೈವಿಕ ತಂತ್ರಜ್ಞಾನವಿಭಾಗದ ಜೊತೆ ಹಾಗೂ ಭಾರತ ಸರಕಾರದ ಮೂಲಕ ವಿಶೇಷ ಯೋಜನೆಗಳ ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿತು. ಈ ಯೋಜನೆಯು 2003ರಲ್ಲಿ ಆರಂಭವಾಗಿ 2007ರಲ್ಲಿ ಸಾರ್ವಜನಿಕರಿಗೆ ತೆರೆದುಕೊಂಡಿತು. ಇದು ಇಡೀ ದೇಶದಲ್ಲೇ ವಿಶಿಷ್ಠ ಯೋಜನೆಯಾಗಿದ್ದು ರಾಷ್ಟ್ರಕ್ಕೆ ಮಾದರಿಯಾಗಿದೆ. ಇದರಿಂದ ಪ್ರೇರಣೆಗೊಂಡ ಕೆಲವು ಉದ್ಯಾನವನಗಳು ಚಿಟ್ಟೆ ಉದ್ಯಾನವನ್ನು ಜ್ಞಾನದ ಕೇಂದ್ರವಾಗಿ ಮತ್ತು ಪುನರಾವರ್ತಿತ ಯೋಜನೆಯಾಗಿ ಬಳಸುತ್ತಿದ್ದಾರೆ.
ಬನ್ನೇರುಘಟ್ಟ ಉದ್ಯಾನವು ಈ ಕೆಳಗಿನ ಪ್ರಮುಖ ವಿಭಾಗಗಳನ್ನು ಹೊಂದಿದೆ:
ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಚಿಟ್ಟೆಗಳನ್ನು ಹೊಂದಿರುವ ಈ ಉದ್ಯಾನವನ್ನು 7.5 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. 5 ಎಕರೆ ಪ್ರದೇಶದಲ್ಲಿ ರೂಪಿತವಾದ 'ಚಿಟ್ಟೆ ಜಾಡು', ಮೂರು ಗುಮ್ಮಟಗಳನ್ನು ಹೊಂದಿದ ಸಂರಕ್ಷಣಾಲಯ, ಸಂಗ್ರಹಾಲಯ ಮತ್ತು ಮಲ್ಟಿ ಮೀಡಿಯಾ ಶಾಖೆಯನ್ನು ಹೊಂದಿದೆ.
ಅವುಗಳಲ್ಲಿ ಮೊದಲನೆಯದು ಪಾಲಿಕಾರ್ಬೊನೇಟ್ ಮೇಲ್ಛಾವಣಿ ಹೊಂದಿದ 'ಚಿಟ್ಟೆ ರಕ್ಷಣಾಲಯ'. 10500 ಚದರ ಅಡಿ ಪ್ರದೇಶವನ್ನು ಉದ್ಯಾನವನದ ರೀತಿ ವಿನ್ಯಾಸಗೊಳಿಸಿ ಚಿಟ್ಟೆಗಳಿಗೆ ಆವಾಸಸ್ಥಾನ ಕಲ್ಪಿಸಲಾಗಿದೆ.
ಈ ರಕ್ಷಣಾಲಯ ಸಂಗ್ರಹಾಲಯದಂತೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಡಯೋರಾಮಾ (ಪದರಗಳಿಂದ ರಚಿಸಲ್ಪಟ್ಟ ಆಕೃತಿ)ಗಳ ಮೂಲಕ ಚಿಟ್ಟೆಯ ಹೋಸ್ಟ್ ಪ್ಲಾಂಟ್ ಗಳನ್ನು ನಿರ್ಮಿಸಿ ಅವುಗಳ ಮೂಲಕ ಮಾಹಿತಿಯನ್ನು ನೀಡುತ್ತಾರೆ. ಇದಲ್ಲದೇ ಚಿಟ್ಟೆಗಳ ಕುರಿತು ಸಾಕ್ಷ್ಯಚಿತ್ರವನ್ನು ಸಹ ತೋರಿಸಲಾಗುತ್ತದೆ.
ಒಂದು ಅಧ್ಯಯನದ ಪ್ರಕಾರ ಬೇರೆ ಬೇರೆ ಕಾಲದಲ್ಲಿ ಸುಮಾರು 48 ಜಾತಿಯ ಚಿಟ್ಟೆಗಳನ್ನು ಬಿಬಿಬಿಪಿಯಲ್ಲಿ ಕಾಣಬಹುದಾಗಿದೆ. 5 ಕುಂಟುಂಬಕ್ಕೆ ಸೇರಿದ 30 ಜಾತಿಯ ಚಿಟ್ಟೆಗಳಿವೆ. ಪಾಪಿಲಿಯೊನಿಡೆ, ಪಿಯರಿಡೈ, ನಿಮ್ಫಾಲಿಡೆ, ಲೈಸಿನೈಡ್ ಮತ್ತು ಹೆಸ್ಪರಿಡೆಗಳು ವಿಭಿನ್ನ ಋತುಗಳಲ್ಲಿ ರಕ್ಷಣಾವಲಯದಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ.