ಈ ಮೃಗಾಲಯ ಚಂಪಕಧಾಮ ಕಣಿವೆ ಮತ್ತು ಮಿಜ್ರಾ ಕಣಿವೆಯ ನಡುವೆ ಇದೆ. 1971ರಲ್ಲಿ ಇದು ಬೆಂಗಳೂರಿನ ಜನರ ಚಿಕ್ಕ ‘ಪಿಕ್ನಿಕ್ ಕಾರ್ನರ್’ ಆಗಿತ್ತು. ವಿವಿಧ ಜಾತಿಯ ಸಸ್ತನಿಗಳು, ಸರೀಸೃಪಗಳು ಮತ್ತು ಪಕ್ಷಿಗಳು, 94 ವಿವಿಧ ತಳಿಯ ಒಟ್ಟೂ 1941 ಪ್ರಾಣಿಗಳನ್ನು ಸಂರಕ್ಷಿಸಲಾಗಿದೆ. ಇದರ ಜೊತೆಗೆ ಪ್ರವಾಸಿಗರಿಗೆ ಅಧ್ಯಯನಕ್ಕೆ ಅನುಕೂಲವಾಗುವಂತೆ ಮ್ಯೂಸಿಯಂ ಮತ್ತು ಆಡಿಟೋರಿಯಂ ಇವೆ. ತಮಿನ್ ಜಿಂಕೆ, ಹಾಗ್ ಜಿಂಕೆ, ಕಿಂಗ್ ಕೋಬ್ರಾ, ಮೊಸಳೆ, ಹಿಮಾಲಯದ ಕಪ್ಪು ಕರಡಿ, ಪ್ಯಾಂಥರ್ಸ್ ಮತ್ತು ವಿವಿಧ ರೀತಿಯ ಪಕ್ಷಿಸಂಕುಲಗಳು ಇಲ್ಲಿವೆ. ಪ್ರಸ್ತುತ ಈ ಉದ್ಯಾನವನದ ವ್ಯಾಪ್ತಿ 12 ಹೆಕ್ಟೇರ್ ಆಗಿದ್ದು ಇದಕ್ಕೆ ಇನ್ನೂ 20 ಹೆಕ್ಟೇರ್ ಪ್ರದೇಶವನ್ನು ಸೇರಿಸುವ ಕಾರ್ಯ ನಡೆದಿದೆ. ಈ ವಿಸ್ತರಣಾ ಪ್ರದೇಶದಲ್ಲಿ 8 ಹೊಸ ಆವರಣಗಳು ನಿರ್ಮಾಣವಾಗಲಿದೆ.
ಬನ್ನೇರುಘಟ್ಟ ಉದ್ಯಾನವನದಲ್ಲಿರುವ ಸಂಗ್ರಹಾಲಯವು ವಿವಿಧ ಜಾತಿಯ ಪ್ರಾಣಿಗಳ ಟ್ರೋಫಿಗಳು, ಅಸ್ಥಿಪಂಜರ, ಛಾಯಾಚಿತ್ರ, ಪಳೆಯುಳಿಕೆ ಮುಂತಾದವುಗಳ ಶೈಕ್ಷಣಿಕ ಮೌಲ್ಯಗಳನ್ನು ತಿಳಿಸಿಕೊಡುತ್ತದೆ.